ಗುರುವಿನ ಋಣ ತೀರಿಸಿದವರು ಉಂಟೇ?…

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

ಅನಿತಾ ಮೇರಿ ಅವರ ಜತೆಗೆ ಮಾತನಾಡುವವರೆಗೆ ಜನ ಹೀಗೂ ಇರಬಹುದು ಎಂದು ನನಗೆ ಅನಿಸಿರಲಿಲ್ಲ. ಒಬ್ಬ ಶಿಕ್ಷಕಿ ಏನೆಲ್ಲ ಮಾಡಬಹುದು ಎಂದೂ ಗೊತ್ತಿರಲಿಲ್ಲ. ಇದೆಲ್ಲ ಅಜೀಬು ಸಮಾಚಾರ! ಅವರು ಭದ್ರಾವತಿಯ ಹಳೆನಗರದ ಬಾಲಕರ ಸರ್ಕಾರಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ. ಅಲ್ಲಿಗೆ ವರ್ಗವಾಗಿ ಬಂದು ಸುಮಾರು ಒಂದು ವರ್ಷವಾಗಿದೆ.

ಶಾಲೆಯಲ್ಲಿ ಮಕ್ಕಳು ಕಡುಬಡವರು. ಶಾಲೆಯ ಪರಿಸರವೇ ಹಾಗೆ ಇದೆ. ಸುತ್ತಮುತ್ತ ಎಲ್ಲ ಬಡವರೇ. ಅವರ ಮಕ್ಕಳೇ ಶಾಲೆಗೆ ಬರುವವರು. ಮಕ್ಕಳಿಗೆ ಸರ್ಕಾರ ಕೊಡುವ ಸಮವಸ್ತ್ರದ ಬಟ್ಟೆಯಲ್ಲಿ ಅಂಗಿ ಚೆಡ್ಡಿ ಹೊಲಿಸಿ ಕೊಡಲೂ ಅವರ ಬಳಿ ದುಡ್ಡು ಇಲ್ಲ. ಮಕ್ಕಳು ಹಾಗೆಯೇ ಹರಕಲು ಅಂಗಿ ಚೆಡ್ಡಿ ಹಾಕಿಕೊಂಡೇ ಶಾಲೆಗೆ ಬರುತ್ತಿದ್ದುವು. ಶಾಲೆಯ ಹಾಜರಿ ಸಂಖ್ಯೆ ದಿನೇ ದಿನೇ ಕಡಿಮೆ ಆಗುತ್ತಿತ್ತು. ಅನಿತಾ ಮೇರಿ, ಇನ್ನೊಬ್ಬ ಶಿಕ್ಷಕಿ ವಿನೋದಮ್ಮ ಸೇರಿಕೊಂಡು ದಾನಿಗಳನ್ನು ಕಂಡರು.

`ಮಕ್ಕಳಿಗೆ ಸರ್ಕಾರ ಬಟ್ಟೆ ಕೊಡುತ್ತದೆ. ಆದರೆ ಅದರಲ್ಲಿ ಸಮವಸ್ತ್ರ ಹೊಲಿಸಿಕೊಳ್ಳಲು ಅವರಿಗೆ ಆರ್ಥಿಕ ಶಕ್ತಿ ಇಲ್ಲ. ನೀವು ಹಣ ಕೊಟ್ಟರೆ ಅವರು ಹೊಲಿಸಿಕೊಳ್ಳುತ್ತಾರೆ` ಎಂದರು. ಅವರಿಗೆ ಬೆಂಬಲವಾಗಿ ಇತರ ಶಿಕ್ಷಕರು, ಶಾಲೆಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರಕಾಶ್ ಶೇಟ್ ನಿಂತರು. ದಾನಿಗಳು ಉದಾರವಾಗಿ ಮಕ್ಕಳ ಸಮವಸ್ತ್ರದ ಹೊಲಿಗೆ ಕೂಲಿ ಮಾತ್ರವಲ್ಲ, ಷೂ, ಟೈಗಳನ್ನೂ ಕೊಟ್ಟರು. ಮಕ್ಕಳು ಠಾಕು ಠೀಕಾಗಿ ಶಾಲೆಗೆ ಬರತೊಡಗಿದರು. ಹಾಜರಾತಿ ಕಡಿಮೆ ಇದೆ ಎಂದು ಸರ್ಕಾರ ಮುಚ್ಚಿ ಬಿಡಬಹುದಾಗಿದ್ದ ಒಂದರಿಂದ ಏಳನೇ ತರಗತಿವರೆಗಿನ ಈ ಶಾಲೆ ಈ ಇಬ್ಬರು ಶಿಕ್ಷಕಿಯರಿಂದಾಗಿ ಉಳಿದುಕೊಂಡಿದೆ. ಮಕ್ಕಳು, ಅನಿತಾ ಮೇರಿ ಅವರಿಗೆ `ಟೀಚರ್` ಎನ್ನುವ ಬದಲು ಗುಟ್ಟಾಗಿ `ಅಮ್ಮ` ಎಂದು ಕರೆಯತೊಡಗಿದರು.

ನಾನು ಹೇಳಲು ಹೊರಟ ಕಥೆ ಇದಲ್ಲ. ಆ ಶಾಲೆಯ ಒಂದನೇ ತರಗತಿಯಲ್ಲಿ ಹರಿಪ್ರಸಾದ್ (6) ಎಂಬ ಬಾಲಕ ಓದುತ್ತಿದ್ದಾನೆ. ಆತನಿಗೆ ಆಗಾಗ ಎದೆ ನೋವು ಬರುತ್ತಿತ್ತು. ಮೊನ್ನೆ ಆಗಸ್ಟ್ 13ರಂದು ಆತ ಶಾಲೆಯಲ್ಲಿಯೇ ನೋವಿನಿಂದ ತೀವ್ರವಾಗಿ ಒದ್ದಾಡಿದ. ಅನಿತಾ ಮೇರಿ ಆತನ ಪಾಲಕರ ಜತೆಗೆ ಮಗುವಿನ ಸಮಸ್ಯೆಯೇನು ಎಂದು ವಿಚಾರಿಸಿದರು.

`ಮಗುವಿಗೆ ಹುಟ್ಟಿನಿಂದಲೇ ಹೃದಯದ ಕಾಯಿಲೆ. ಎಷ್ಟು ಖರ್ಚು ಬರುತ್ತದೆ ಎಂದು ವಿಚಾರಿಸಲೂ ನಮಗೆ ಧೈರ್ಯವಿಲ್ಲ. ಕಾಡುವ ಬಡತನ. ಮೊದಲು ಇದ್ದ ಅನುಕೂಲ ಸ್ಥಿತಿ ಏನೋ ಆಗಿ ಈಗ ದುರ್ದೆಸೆ ಕಾಡುತ್ತಿದೆ. ಬದುಕಿದಷ್ಟು ದಿನ ಓದಲಿ ಎಂದು ಶಾಲೆಗೆ ಕಳುಹಿಸುತ್ತಿದ್ದೇವೆ` ಎಂದರು ತಂದೆ ತಾಯಿ. `ಸರ್ಕಾರ ಎಷ್ಟೊಂದು ಯೋಜನೆ ರೂಪಿಸುತ್ತದೆ. ಅದರ ಬಗ್ಗೆ ಜನರಿಗೆ ತಿಳಿವಳಿಕೆ ಇಲ್ಲದೇ ಇದ್ದರೆ ಅದು ಹೇಗೆ ವ್ಯರ್ಥವಾಗಿ ಬಿಡಬಹುದು` ಎಂದು ಅನಿತಾ ಅವರಿಗೆ ಅನಿಸಿತು. ಸರ್ವ ಶಿಕ್ಷಣ ಅಭಿಯಾನ ಯೋಜನೆಯಡಿ ಎಲ್ಲ ಮಕ್ಕಳಿಗೆ ಸರ್ಕಾರ `ಸುವರ್ಣ ಆರೋಗ್ಯ ಚೇತನ` ಕಾರ್ಡು ಕೊಡುತ್ತದೆ. ಈ ಕಾರ್ಡು ಇದ್ದರೆ ಮಗುವಿಗೆ ಎಂಥ ಕಾಯಿಲೆ ಇದ್ದರೂ ಅದರ ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ. ಉಚಿತವಾಗಿ ಮಗುವಿಗೆ ಚಿಕಿತ್ಸೆ ಸಿಗುತ್ತದೆ. ಅನಿತಾ ಮೇರಿ ಅವರು ಹರಿಪ್ರಸಾದ್‌ಗೆ ಅಂಥ ಒಂದು ಕಾರ್ಡು ಮಾಡಿಸಿದರು. ತಾಲ್ಲೂಕು ಆರೋಗ್ಯ ಅಧಿಕಾರಿ, ವಲಯ ಶಿಕ್ಷಣ ಅಧಿಕಾರಿ, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ, ಜಿಲ್ಲಾ ಆರೋಗ್ಯ ಅಧಿಕಾರಿ ಬಳಿ ಮಗುವನ್ನು ಕರೆದುಕೊಂಡು ಹೋದರು. ಎಲ್ಲರೂ ಮಗುವಿಗೆ ಹೃದಯದ ಶಸ್ತ್ರ ಚಿಕಿತ್ಸೆ ಆಗಬೇಕಿದೆ ಎಂದು ವರದಿ ಕೊಟ್ಟರು.

ಮಗುವನ್ನು ಬೆಂಗಳೂರಿಗೆ ಕರೆದುಕೊಂಡು ಬರಲು ಪ್ರಯಾಣ ವೆಚ್ಚ ಭರಿಸಲೂ ತಂದೆ ತಾಯಿ ಬಳಿ ಹಣವಿರಲಿಲ್ಲ. ಅನಿತಾ ಅವರೇ ಅದನ್ನೂ ಜೋಡಿಸಿಕೊಂಡು ಮಗು ಮತ್ತು ಪಾಲಕರನ್ನು ಕರೆದುಕೊಂಡು ಜಯದೇವ ಹೃದ್ರೋಗ ಚಿಕಿತ್ಸಾ ಕೇಂದ್ರಕ್ಕೆ ಬಂದರು.

ಡಾ.ಗಿರಿಧರ್, ಮಗುವಿನ ಆರೋಗ್ಯ ತಪಾಸಣೆ ಮಾಡಿದರು. `ನಾಲ್ಕು ದಿನ ಬಿಟ್ಟು ಬನ್ನಿ. ಆ ವೇಳೆಗೆ ಸುವರ್ಣ ಆರೋಗ್ಯ ಚೇತನ ಯೋಜನೆ ಅಡಿಯಲ್ಲಿ ಮಗುವಿನ ಶಸ್ತ್ರ ಚಿಕಿತ್ಸೆಯ ವೆಚ್ಚ ಆಸ್ಪತ್ರೆಗೆ ಜಮಾ ಆಗಿರುತ್ತದೆ. ಶಸ್ತ್ರ ಚಿಕಿತ್ಸೆ ಮಾಡೋಣ` ಎಂದರು. ಅನಿತಾ ಮೇರಿಯೂ ಹೃದ್ರೋಗಿ. ಅವರಿಗೂ ಡಾ.ಗಿರಿಧರ್ ಅವರೇ ಚಿಕಿತ್ಸೆ ಮಾಡಿದ್ದರು. ನಾಲ್ಕು ದಿನ ಬಿಟ್ಟು ಮತ್ತೆ ಬೆಂಗಳೂರಿಗೆ ಬಂದರು. ಹಣ ಜಮಾ ಆಗಿತ್ತು. ಶಸ್ತ್ರ ಚಿಕಿತ್ಸೆಗೆ ಎಲ್ಲ ಸಜ್ಜಾಯಿತು. `ನಾಲ್ಕು ಬಾಟಲು ರಕ್ತ ಬೇಕು` ಎಂದರು ವೈದ್ಯರು. ಎಲ್ಲಿ ತರುವುದು? ಅನಿತಾ ಮೇರಿ `ಜಸ್ಟ್ ಡಯಲ್`ಗೆ ಫೋನ್ ಮಾಡಿದರು. ಕರ್ನಾಟಕ ವಿದ್ಯಾರ್ಥಿ ಕೂಟದ ಹರ್ಷ ಅವರ ನಂಬರ್ ಸಿಕ್ಕಿತು. ಅತ್ತ ತಂದೆ ತಾಯಿಯೂ ರಕ್ತ ತರಲು ಹೆಣಗುತ್ತಿದ್ದರು. ಸುದೈವವೋ ದುರ್ದೈವವೋ ಇಬ್ಬರೂ ಒಬ್ಬರನ್ನೇ ಸಂಪರ್ಕಿಸಿದ್ದರು. ನಾಲ್ಕು ಬಾಟಲಿ ಬದಲು ಎರಡು ಬಾಟಲು ರಕ್ತ ಸಿಕ್ಕಿತು. ಇನ್ನೂ ಎರಡು ಬಾಟಲು ಇಲ್ಲ ಎಂದು ಶಸ್ತ್ರ ಚಿಕಿತ್ಸೆ ಮುಂದಕ್ಕೆ ಹೋಯಿತು. ಅನಿತಾ ಮೇರಿ ಮತ್ತೆ ಹರ್ಷ ಅವರಿಗೆ ಕರೆ ಮಾಡಿದರು. ಹರ್ಷ ಅವರು ಇನ್ನೂ ಎರಡು ಬಾಟಲು ರಕ್ತ ಕೊಡಿಸಿದರು. ಎಬಿ ಪಾಸಿಟಿವ್ ರಕ್ತ ಬೇಕಾಗಿತ್ತು. ಈ ಹರ್ಷ ಕಾಲೇಜೊಂದರಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದಾರೆ. ಅವರು ರಕ್ತ ಕೊಡುವ ನಾಲ್ಕು ಸಾವಿರ ಜನರ ತಂಡ ಕಟ್ಟಿದ್ದಾರೆ. ಅವರ ಬಗೆಗೂ ಬರೆಯುತ್ತೇನೆ. ಸೆಪ್ಟೆಂಬರ್ 6ರಂದು ಶಿಕ್ಷಕರ ದಿನದ ಮರುದಿನ ಮಗುವಿನ ಶಸ್ತ್ರ ಚಿಕಿತ್ಸೆ ಆಯಿತು. ಅನಿತಾ ಮೇರಿ ಆಸ್ಪತ್ರೆಯ ಶಸ್ತ್ರ ಚಿಕಿತ್ಸೆ ಕೊಠಡಿ ಆಚೆ ಏಸುವಿನ ಪ್ರಾರ್ಥನೆ ಮಾಡುತ್ತ ನಿಂತುಕೊಂಡಿದ್ದರು.

ಅತ್ತ ಹರಿಪ್ರಸಾದ್ ಶಸ್ತ್ರ ಚಿಕಿತ್ಸೆ ನಡೆಯುತ್ತಿದ್ದಾಗ ಇತ್ತ ಬಾಗಲಕೋಟೆ ಜಿಲ್ಲೆಯಿಂದ ತನ್ನ ಮಗುವನ್ನು ಇದೇ ರೀತಿ ಹೃದ್ರೋಗ ಚಿಕಿತ್ಸೆಗೆ ಕರೆದುಕೊಂಡು ಬಂದಿದ್ದ ತಾಯಿ ಮತ್ತು ಮಗು ಹಳಸಿ ಹೋಗಿದ್ದ ಅನ್ನ ತಿನ್ನುತ್ತಿದ್ದರು. ಅವರ ಬಳಿ ಚಿಲ್ಲರೆ ಬಿಡಿಗಾಸು ಮಾತ್ರ ಇದ್ದುವು. ಒಂದೇ ಒಂದು ನೋಟು ಅವರ ಬಳಿ ಇರಲಿಲ್ಲ. ಆ ಮಗುವಿಗೆ ಸುವರ್ಣ ಆರೋಗ್ಯ ಚೇತನ ಕಾರ್ಡು ಇತ್ತು. ಆದರೆ ತಾಲ್ಲೂಕು, ಜಿಲ್ಲಾ ಆರೋಗ್ಯ ಅಧಿಕಾರಿಗಳ ಶಿಫಾರಸು ಪತ್ರ ಇರಲಿಲ್ಲ. ಅಂಥ ಶಿಫಾರಸು ಪತ್ರ ತರುವವರೆಗೆ ಶಸ್ತ್ರಚಿಕಿತ್ಸೆ ಮಾಡುವುದಿಲ್ಲ. ಸರ್ಕಾರದಿಂದ ಆಸ್ಪತ್ರೆಗೆ ಹಣವೂ ಜಮಾ ಆಗುವುದಿಲ್ಲ. ಅದನ್ನು ತೆಗೆದುಕೊಂಡು ಬರಬೇಕು ಎಂದು ಆ ತಾಯಿಗೆ ಗೊತ್ತಿರಲಿಲ್ಲ. ಹೇಳುವ ಶಿಕ್ಷಕರೂ ಇರಲಿಲ್ಲ. ಮಗುವಿಗೆ ಚಿಕಿತ್ಸೆ ಆಗಬೇಕಾದರೆ ಏನೇನು ಮಾಡಬೇಕು ಎಂದು ಅನಿತಾ ಅವರೇ ಆ ತಾಯಿಗೆ ಹೇಳಿದರು. `ನನಗ ಇದೆಲ್ಲ ಗೊತ್ತಿರಲಿಲ್ಲವ್ವ` ಎಂದು ಆ ತಾಯಿ ಮತ್ತೆ ಬಾಗಲಕೋಟೆಯ ಬಸ್ಸು ಹತ್ತಿದರು. ಒಂದು ಹೊತ್ತಿನ ಊಟಕ್ಕೂ ಪರದಾಡುವ ಆ ತಾಯಿ ಮತ್ತೆ ಬೆಂಗಳೂರಿಗೆ ಮಗುವನ್ನು ಕರೆದುಕೊಂಡು ಬರಲು ಜೀವವನ್ನು ಒತ್ತೆ ಇಡಬೇಕು. ಬದುಕು ಎಷ್ಟು ದುರ್ಭರ? ಎಷ್ಟೆಷ್ಟು ರೀತಿ ನಮ್ಮನ್ನು ಪರೀಕ್ಷೆ ಮಾಡುತ್ತದೆ?…

ಅನಿತಾ ಮೇರಿ ಮೊನ್ನೆ ಶುಕ್ರವಾರ ಮತ್ತೆ ಬೆಂಗಳೂರಿಗೆ ಬಂದಿದ್ದರು. ನಸುಕಿನ 4.30ಕ್ಕೆ ಶಿವಮೊಗ್ಗಕ್ಕೆ ಬಂದು ಇಂಟರ್‌ಸಿಟಿ ಹತ್ತಿ, ಮಗು ಹರಿಪ್ರಸಾದ್‌ನನ್ನು ಕರೆದುಕೊಂಡು ಮತ್ತೆ ಊರಿಗೆ ಹೋದರು. ಆತನ ಪಾಲಕರೂ ಅನಿತಾ ಜತೆಗಿದ್ದರು. ಒಬ್ಬ ಶಿಕ್ಷಕಿ ತನ್ನ ವಿದ್ಯಾರ್ಥಿಗಾಗಿ ಹೀಗೆಲ್ಲ ಏಕೆ ಮಾಡುತ್ತಾರೆ? ತನ್ನ ವಿದ್ಯಾರ್ಥಿಯನ್ನು ತನ್ನ ಮಕ್ಕಳಿಗಿಂತ ಹೆಚ್ಚು ಏಕೆ ಪ್ರೀತಿಸುತ್ತಾರೆ? ಅಷ್ಟೊಂದು ಪ್ರೀತಿಯನ್ನು ಆ ವಿದ್ಯಾರ್ಥಿ ಹೇಗೆ ಮರಳಿಸುತ್ತಾನೆ? ಹರಿಪ್ರಸಾದ್ ಬದುಕಿ ಉಳಿದಿದ್ದಾನೆ. ಆತ ಮುಂದೆ ದೊಡ್ಡ ಮನುಷ್ಯ ಆಗಬಹುದು. ಊರಿಗೆ ಹೊರಟು ನಿಂತ ಅವನ ಜತೆ ಮಾತನಾಡಿದೆ. `ನಮಸ್ತೇ ಸರ್` ಎಂದ. `ಚೆನ್ನಾಗಿ ಓದು` ಎಂದೆ. `ಫಸ್ಟ್ ಬರ್ತೇನೆ ಸರ್` ಎಂದ. ತಕ್ಷಣ ಫೋನ್ (99007-00241) ತೆಗೆದುಕೊಂಡ ಅನಿತಾ , `ಅವನು ಜಾಣ ಇದ್ದಾನೆ ಸರ್` ಎಂದರು. ಜೀವ ಉಳಿಸಿದ ಈ ಶಿಕ್ಷಕಿಗೆ ಆತ ಏನು ಕೊಡಲು ಸಾಧ್ಯ? ಅನಿತಾ ಅವರ ಋಣವನ್ನು ಹರಿಪ್ರಸಾದ್ ಹೇಗೆ ತೀರಿಸಬಲ್ಲ? ಇದು ಬರೀ ಹರಿಪ್ರಸಾದ್ ವಿಚಾರ ಮಾತ್ರ ಅಲ್ಲ. ಎಲ್ಲ ವಿದ್ಯಾರ್ಥಿಗಳ ವಿಚಾರ.

ಈ ಅಂಕಣ ಬರೆಯುತ್ತಿದ್ದಾಗ ನನ್ನ ಊರು ಮುದ್ದೇಬಿಹಾಳದಿಂದ, ನನಗೆ ಕಾಲೇಜಿನಲ್ಲಿ ಮೇಷ್ಟರಾಗಿದ್ದ ಪ್ರೊ.ಬಿ.ಎಂ.ಹಿರೇಮಠ ಕರೆ  ಮಾಡಿದರು. `ನಿಮ್ಮ ಗುರು ಸಿ.ಎಸ್.ಹಿರೇಮಠರು ತೀರಿಕೊಂಡರು` ಎಂದರು. ಸಿ.ಎಸ್.ಹಿರೇಮಠರಿಗೆ 86 ವರ್ಷ ವಯಸ್ಸಾಗಿತ್ತು. ಗರಿ ಗರಿಯಾದ ಬಿಳಿ ಧೊತ್ರ, ಬಿಳಿ ಅಂಗಿ, ಮೇಲೊಂದು ಕರಿ ಕೋಟು ಧರಿಸಿಯೇ ಶಾಲೆಗೆ ಬರುತ್ತಿದ್ದ ಹಿರೇಮಠರು ನಮಗೆ ಹೈಸ್ಕೂಲಿನಲ್ಲಿ ಕನ್ನಡ ಮತ್ತು ಸಂಸ್ಕೃತ ಹೇಳಿಕೊಟ್ಟಿದ್ದರು. ಅವರದು ಪರಿಶುಭ್ರ ವ್ಯಕ್ತಿತ್ವ, ಅಪರೂಪದ ಶಿಷ್ಯವಾತ್ಸಲ್ಯ.

ಕನ್ನಡ ಪ್ರೀತಿಯ ಬೇರುಗಳನ್ನು ನನ್ನ ಎದೆಯಾಳದಲ್ಲಿ ನೆಟ್ಟು ಅದು ಹೆಮ್ಮರವಾಗಿ ಬೆಳೆಯುವಂತೆ ಮಾಡಿದವರು ಹಿರೇಮಠರು. ಅವರು ಅದನ್ನು ನಮಗೆ ತಿಳಿಯದಂತೆ ಮಾಡಿದರು. ಗುರು ಯಾವಾಗಲೂ ಮಾಡುವುದು ಹೀಗೆಯೇ! ನನ್ನ ಸಹಪಾಠಿಗಳಲ್ಲಿ ನಾನು ಮಾತ್ರ ಕನ್ನಡದ ಕೈ ಹಿಡಿದು ಮುಂದೆ ನಡೆದೆ. ಉಳಿದವರೆಲ್ಲ ವೈದ್ಯರೋ, ಎಂಜಿನಿಯರುಗಳೋ, ವ್ಯಾಪಾರಿಗಳೋ ಆದರು. ಹಿರೇಮಠರ ಋಣವನ್ನು ನಾನು ಹೇಗೆ ತೀರಿಸಬಲ್ಲೆ? ಎರಡು ಹನಿ ಕಣ್ಣೀರು ಬಿಟ್ಟು ಅವರಿಗೆ ಈಗ ಇನ್ನೇನು ಕೊಡಲು ಸಾಧ್ಯ?

ಪದ್ಮರಾಜ ದಂಡಾವತಿ-ಪ್ರಜಾವಾಣಿ

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)
ಅಶ್ವಿನಿ

About ಅಶ್ವಿನಿ