ಗ್ಲ್ಯಾಮರ್ ಗೊಂಬೆಯಲ್ಲ ಈ ಹೀನಾ…

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

(* ಡಿ. ಉಮಾಪತಿ)

ಸೂರ್ಯರಶ್ಮಿ, ಸಮೃದ್ಧಿ, ಶುಭವಾರ್ತೆ, ಪೋರಿ, ಪರಿಮಳ, ಮತ್ಸ್ಯದೇವತೆ, ಚಂದ್ರಮ… ಹೀನಾ ಅಂದ್ರೆ ಹತ್ತು ಹಲವು ಅರ್ಥಗಳು !

ಭಾರತಕ್ಕೆ ಭೇಟಿ ನೀಡಲೆಂದೇ ಪಾಕಿಸ್ತಾನದ ವಿದೇಶಾಂಗ ಮಂತ್ರಿ ಆದವರು ಹೀನಾ ರಬ್ಬಾನಿ ಖಾರ್. ಪಾಕ್ ಉಗ್ರರು ಮುಂಬಯಿ ಮೇಲೆ ನಡೆಸಿದ ದಾಳಿಯಿಂದ ವರ್ಷಗಟ್ಟಲೆ ಹಿಮಗಟ್ಟಿದ ಸಂಬಂಧವನ್ನು ಕರಗಿಸಲೆಂದೇ ಉಕ್ಕು ಯೌವ್ವನದ ಚತುರ ಮಾತಿನ ಹೊಸ ಮುಖವನ್ನು ಹೂಡಿತ್ತು ಜರ್ದಾರಿ ಸರ್ಕಾರ ಎನ್ನುವ ಮಾತುಗಳಿವೆ. ಮೂವತ್ತನಾಲ್ಕು ವರ್ಷ ವಯಸ್ಸಿನ ಹೀನಾ ದಿಲ್ಲಿಯಲ್ಲಿ ಬಂದಿಳಿದಾಗ ಸಮೂಹ ಮಾಧ್ಯಮಗಳ ತುಂಬ ಆಕೆಯ ಉಡುಗೆ ತೊಡುಗೆ ರೂಪರಾಶಿಯದೇ ಚರ್ಚೆ.

ಪಾಕಿಸ್ತಾನದ ಅತಿ ಕಿರಿ ವಯಸ್ಸಿನ ಪ್ರಥಮ ವಿದೇಶಾಂಗ ಮಂತ್ರಿ ಸುದ್ದಿ ಮಾಡಿದ್ದು ಕೂಟನೀತಿಯ ಜಾಣತನಕ್ಕೆ ಅಲ್ಲ. ಬದಲಾಗಿ ಕತ್ತಿನಲ್ಲಿ ಧರಿಸಿದ್ದ ಮಿಕಿಮೋಟೋ ಮುತ್ತುಗಳು, ಕೈಯಲ್ಲಿ ಹಿಡಿದಿದ್ದ ಲಕ್ಷಾಂತರ ರುಪಾಯಿ ಬೆಲೆ ಬಾಳುವ ಹರ್ಮಿಸ್ ಬರ್ಕಿನ್ ಬ್ಯಾಗ್, ಅರ್ಧ ಮುಖ ಮುಚ್ಚುವಂತೆ ಕಣ್ಣಿಗೇರಿಸಿದ್ದ ರಾಬರ್ಟೋ ಕ್ಯಾವಲಿ ತಂಪು ಕನ್ನಡಕ, ಮಣಿಕಟ್ಟಿಗೆ ವಜ್ರಖಚಿತ ಕಡಗ, ಋತುಮಾನಕ್ಕೆ ಒಪ್ಪುವ ನೀಲಿ ವರ್ಣದ ಪೋಷಾಕುಗಳು ಸಮೂಹ ಮಾಧ್ಯಮಗಳಲ್ಲಿ ಚರ್ಚೆಗೆ ಗ್ರಾಸ ಆಗಿದ್ದವು.

ತಮ್ಮದೇ ನೆಲದಿಂದ ಟೀಕೆಯ ದಾಳಿಯನ್ನು ಎದುರಿಸಿದ್ದರು ಹೀನಾ. ಆಕೆ ಹಿಡಿದಿದ್ದ ಬ್ಯಾಗ್‌ನ ಬೆಲೆ ಹತ್ತು ಸಾವಿರದಿಂದ ಮೂವತ್ತು ಸಾವಿರ ಡಾಲರುಗಳು. ಸರಾಸರಿ ಪಾಕಿಸ್ತಾನಿಯೊಬ್ಬನ ಮೂವತ್ತು ವರ್ಷಗಳ ದುಡಿಮೆಯ ಮೊತ್ತ! ಸಾಲದಲ್ಲಿ ಮುಳುಗೇಳುತ್ತಿರುವ ದೇಶ, ಬಡತನದ ರೇಖೆಯ ಕೆಳಗೆ ನರಳುತ್ತಿರುವ ದೊಡ್ಡ ಸಂಖ್ಯೆಯ ದೇಶಬಾಂಧವರು, ಪ್ರವಾಹಕ್ಕೆ ಸಿಲುಕಿ ನೆಲೆತಪ್ಪಿ ಪರಿತಪಿಸುವ ಲಕ್ಷಾಂತರ ಮಂದಿಯ ದೇಶವನ್ನು ಪ್ರತಿನಿಧಿಸುವ ಮಂತ್ರಿ ಇಂತಹ ವಿಲಾಸದ ಪ್ರದರ್ಶನ ಮಾಡಬೇಕೇ ಎಂಬ ಪ್ರಶ್ನೆಗಳು ಖುದ್ದು ಆಕೆಯ ದೇಶದ ಸಮೂಹ ಮಾಧ್ಯಮಗಳಲ್ಲೇ ಎದ್ದಿದ್ದವು.

ಆದರೆ ಇಂತಹ ಟೀಕೆ ಮಹಿಳಾ ಮಂತ್ರಿಗೆ ಮಾತ್ರವೇ ಸೀಮಿತವೇಕೆ ಪುರುಷ ಮಂತ್ರಿಗಳು ಧರಿಸುವ ಅರ್ಮಾನಿ ಸೂಟ್?ಗಳು, ಟೈಗಳು, ಶೂಗಳ ಕುರಿತು, ಅವರ ಇತರೆ ಇತ್ಯಾದಿ ಗೀಳುಗಳ ಕುರಿತು ಯಾಕೆ ಯಾರೂ ಮಾತಾಡುವುದಿಲ್ಲ. ಇಂತಹ ಲಿಂಗತಾರತಮ್ಯ ಯಾಕೆ ಎಂಬ ಪ್ರತಿ ಪ್ರಶ್ನೆಗಳೂ ಸಂವಾದದ ಭಾಗವಾದದ್ದು ಉಂಟು.

ಭಾರತಕ್ಕೆ ಬಂದಿಳಿದ ಪಾಕಿಸ್ತಾನಿ ಬಾಂಬ್…. ತನ್ನ ಅತಿ ಸುಂದರ ಚಹರೆ ಧರಿಸಿದ ಪಾಕ್… ಮೈ ಬೆವರೊಡೆಸಿದ ರೂಪದರ್ಶಿಯಂತಹ ಮಂತ್ರಿ ಎಂಬೆಲ್ಲ ಪತ್ರಿಕಾ ತಲೆಬರೆಹಗಳು ಭಾರತದಲ್ಲಿ ಹೀನಾ ಅವರನ್ನು ಸ್ವಾಗತಿಸಿದ್ದವು. ಎಪ್ಪತ್ತೊಂಬತ್ತರ ಎಸ್‌ಎಂಕೆ ಮುಂದೆ ನಿಂತ ಮೂವತ್ತನಾಲ್ಕರ ಎಚ್ ಆರ್ ಕೆ ದಂಗು ಬಡಿಸಿದ್ದರು. ವಯಸ್ಸಿಗೆ ಮೀರಿದ ಪ್ರಬುದ್ಧತೆ, ವಾಕ್ಚಾತುರ್ಯ ಪ್ರದರ್ಶಿಸಿದ್ದರು. ಚೆಲುವಿನ ಜೊತೆಗೆ ಚಾತುರ್ಯವನ್ನೂ ಸಂವಾದದ ಮೇಜಿಗಿಟ್ಟಿದ್ದರು. ಗ್ಲ್ಯಾಮರ್ ಗೊಂಬೆ ಎನ್ನುವವರ ಬಾಯಿ ಮುಚ್ಚಿಸಿದ್ದರು. ಸಮೂಹ ಮಾಧ್ಯಮಗಳು ಆಕೆಯ ವೇಷ ಭೂಷಣಗಳು, ಗ್ಲ್ಯಾಮರ್ ಕುರಿತು ಬರೆದದ್ದನ್ನು ಹೀನಾ ಒಪ್ಪಲಿಲ್ಲ. ಗಮನ ಸೆಳೆಯಬೇಕಾದದ್ದು ಕೆಲಸ ಕಾರ್ಯ ಬುದ್ಧಿಮತ್ತೆಯೇ ವಿನಾ ಉಡುಗೆ ತೊಡುಗೆ ಅಲ್ಲ ಎಂದಿದ್ದರು.

ಅಂದಿನಿಂದ ಇಂದಿನ ತನಕ ಭಾರತದ ಎಸ್‌ಎಂಕೆ ಮತ್ತು ಪಾಕಿಸ್ತಾನದ ಎಚ್‌ಆರ್‌ಕೆ ಹಲವು ಅಂತಾರಾಷ್ಟ್ರೀಯ ವಿದೇಶಾಂಗ ವೇದಿಕೆಗಳಲ್ಲಿ ಮುಖಾ ಮುಖಿ ಆಗಿದ್ದಾರೆ. ಈ ಮುಖಾಮುಖಿ ಹೆಪ್ಪುಗಟ್ಟಿದ ಹಿಮವನ್ನು ತುಸುವಾದರೂ ಕರಗಿಸಿರುವುದು ಹೌದು. ಹೀನಾ ಆಹ್ವಾನ ಸ್ವೀಕರಿಸಿದ ಎಸ್ ಎಂ ಕೆ ಸುದ್ದಿಗಾರರ ದೊಡ್ಡ ದಂಡಿನ ಜತೆಗೆ ಪಾಕಿಸ್ತಾನಕ್ಕೂ ಭೇಟಿ ನೀಡಿ ಬಂದರು. ದ್ವಿಪಕ್ಷೀಯ ಮಾತುಕತೆಗಳ ನಂತರ ಇಬ್ಬರೂ ಜಂಟಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಆಡಿದ ಮಾತುಗಳ ಕುರಿತು ಹೇಳುವುದಾದರೆ ಹೀನಾಗೇ ಪೂರ್ಣ ಅಂಕಗಳು. ಲಿಖಿತ ಭಾಷಣದತ್ತ ಒಮ್ಮೆಯೂ ಕಣ್ಣು ಹರಿಸದೆ ಉಭಯ ದೇಶಗಳ ಸಂಬಂಧ ಕುರಿತು ಹರಿಸಿದ ವಾಗ್ಛರಿ, ಪದಗಳನ್ನು ಆರಿಸಿ ಅಳೆದು ತೂಗಿ ವಾಕ್ಯಗಳಲ್ಲಿ ಪೋಣಿಸುವ ಪರಿ ವಾಹ್ ವಾಹ್ ಉದ್ಗಾರಗಳನ್ನು ಹೊರಡಿಸಿತ್ತು.

ಜಾಣತನದ ಮಾತುಗಳಿಂದ ಮರುಳು ಮಾಡಿದ ಹೀನಾ ಇತಿಹಾಸದ ಕೈದಿಗಳಾಗಬೇಡಿ (ಮುಂಬಯಿ ದಾಳಿಯನ್ನೇ ಗಟ್ಟಿಯಾಗಿ ಹಿಡಿದು ಕೂರಬೇಡಿ) ಎಂದು ಭಾರತಕ್ಕೆ ಬೋಧಿಸಿದರು. ಆದರೆ ಕಾಶ್ಮೀರ ಮತ್ತು ಸಿಯಾಚಿನ್‌ನ್ನು ಪಾಕಿಸ್ತಾನ ಮರೆಯುವುದಿಲ್ಲವಂತೆ! ಕಹಿಯನ್ನೂ ಸಿಹಿ ಸಿಹಿಯಾಗಿ ಉಣಿಸುವ ಕಲೆ ಆಕೆಗೆ ಕರಗತ.

ಹೀನಾಗೆ ಮುನ್ನ ಪಾಕಿಸ್ತಾನದ ವಿದೇಶಾಂಗ ಮಂತ್ರಿಯಾಗಿದ್ದವರು ಷಾ ಮಹಮೂದ್ ಖುರೇಶಿ ಅವರು ಏರಿಗೆಳೆಯುವ ಎತ್ತಿನ ಜೊತೆಗೆ ಹೂಡಲಾದ ನೀರಿಗೆಳೆಯುವ ಕೋಣನಂತೆ. ಬೇಕೆಂದೇ ಕಾಲು ಕೆರೆದು ಭಾರತಕ್ಕೆ ಮುಖಭಂಗ ಉಂಟು ಮಾಡಲು ಪ್ರಯತ್ನಿಸುವ ಸರಕಾರಿ ಅಥವಾ ಲಷ್ಕರಿ ಪಾಕಿ. ಹೀನಾ ಹಾಗಲ್ಲ. ಈ ಹಾಗಲ್ಲ ಎನ್ನುವುದರ ಹಿಂದೆ ಭಾರತದ ಜೊತೆಗೆ ಅನಿವಾರ್ಯಕ್ಕಾದರೂ ಗೆಳೆತನದ ಹಸ್ತ ಚಾಚಬೇಕು ಎಂಬ ಪಾಕಿಸ್ತಾನದ ಅಸಹಾಯಕತೆ ಇದ್ದೀತು. ಅದೇನೇ ಇದ್ದರೂ ಕೃಷ್ಣ ಮತ್ತು ಹೀನಾ ಜೊತೆಗೂಡಿ ನಡೆಯುವವರು.

ಸಾವಿರಾರು ಎಕರೆಗಳ ಜಮೀನಿಗೆ ಒಡೆಯರಾದ ಊಳಿಗಮಾನ್ಯ ಪಾಳೇಗಾರಿಕೆ ಕುಟುಂಬಗಳು ಈಗಲೂ ಪಾಕಿಸ್ತಾನವನ್ನು ಆಳುತ್ತಿವೆ. ಲಕ್ಷಾಂತರ ಗೇಣಿದಾರರ ಪಾಲಿಗೆ ಈ ಭೂಮಾಲೀಕರು ಧರೆಯ ಮೇಲಿನ ದೇವತೆಗಳು. ಜಮೀನಿಗೆ ಮಾತ್ರವೇ ಅಲ್ಲದೆ ಗೇಣಿದಾರರ ಮೈ ಮನಗಳಿಗೂ ಅವರೇ ಮಾಲೀಕರು. ಅವರ ಆಣತಿಯೇ ಅಂತಿಮ. ಪಾಕಿಸ್ತಾನಿ ಪಂಜಾಬಿನ ಇಂತಹುದೇ ಕುಟುಂಬದಿಂದ ಹುಟ್ಟಿ ಬಂದವರು ಹೀನಾ ರಬ್ಬಾನಿ ಖಾರ್..

ಲಾಹೋರ್ ವಿಶ್ವವಿದ್ಯಾಲಯದಿಂದ ಮ್ಯಾನೇಜ್ ಮೆಂಟ್ ಸೈನ್ಸಸ್ ಬ್ಯಾಚೆಲರ್ ಪದವಿಯ ನಂತರ ಅಮೆರಿಕೆಯ ಮಸಾಚುಸೆಟ್ಸ್ ವಿ.ವಿ.ಯಲ್ಲಿ ಅದೇ ವಿಷಯದಲ್ಲಿ ಮಾಸ್ಟರ್ಸ್ ಪದವಿ ಗಳಿಸಿರುವ ಈಕೆ ಪಶ್ಚಿಮದ ಸಂಸ ್ಕೃತಿಗೆ ತೆರೆದುಕೊಂಡ ಪಾಕಿಸ್ತಾನಿ ಕುಲೀನೆ. ಓದಿನ ನಂತರ ಫಿರೋಜ್ ಗುಲ್ಜಾರ್ ಜತೆಗೆ ವಿವಾಹ. ಇಬ್ಬರು ಗಂಡು ಮಕ್ಕಳು ಮತ್ತು ಹೆಣ್ಣು ಮಗುವೊಂದರ ತಾಯಿ. ಎಲ್ಲ ಕುಲೀನ ಕುಟುಂಬಗಳಂತೆ ಈಕೆಗೂ ಪೋಲೋ ಕ್ರೀಡೆಯ ಷೋಕಿ. ಉತ್ತಮ ಕುದುರೆಗಳ ಲಾಯದ ಒಡತಿ. ಸುಪ್ರೀಮ್ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿಯ ಸೊಸೆಯೊಂದಿಗೆ ಪಾಲುದಾರಿಕೆಯಲ್ಲಿ ಲಾಹೋರಿನಲ್ಲಿ ತೆರೆದ ವಿಲಾಸೀ ಪೋಲೋ ರೆಸ್ಟುರಾ ಖ್ಯಾತಿ ಗಳಿಸಿದ ನಂತರ ಇಸ್ಲಾಮಾಬಾದ್‌ನಲ್ಲೂ ಅದರ ಶಾಖೆಯ ಆರಂಭ.

ತೆಹ್ ಮಿನಾ ದುರಾನಿ ಬರೆದ ಆತ್ಮಚರಿತ್ರೆ ರೂಪದ ಕೃತಿ My Feudal Lord ಅಂತಾರಾಷ್ಟ್ರೀಯ ಖಾತಿ ಗಳಿಸಿದ ಆಕೆಯ ನೋವಿನ ಕತೆ. ನಮ್ಮ ಹೆಸರಾಂತ ಬರೆಹಗಾರ್ತಿ ಕಮಲಾದಾಸ್ ಸುರೈಯ್ಯಾ ಅವರ J¦ T|sw¦ ದಶಕಗಳ ಹಿಂದೆ ನಮ್ಮ ಪಿತೃ ಪ್ರಧಾನ ಸಮಾಜದಲ್ಲಿ ಎಬ್ಬಿಸಿದಂತಹುದೇ ಸುಂಟರಗಾಳಿಯನ್ನು ದುರಾನಿ ಕೃತಿ ಕೂಡ ಎಬ್ಬಿಸಿತ್ತು. ಪಾಕಿಸ್ತಾನಿ ಪಂಜಾಬಿನ ಮುಖ್ಯಮಂತ್ರಿ ಮತ್ತು ಆನಂತರ ರಾಜ್ಯಪಾಲರೂ ಆಗಿದ್ದ ಘುಲಾಮ್ ಮುಸ್ತಫಾ ಖಾರ್ ಅವರನ್ನು ವಿವಾಹವಾಗಿದ್ದ ದುರಾನಿ ಆತನ ಕೈಯಲ್ಲಿ ಅನುಭವಿಸಿದ ನರಕವನ್ನು ಊಛ್ಠಿಚ್ಝ ಔಟ್ಟ ನಲ್ಲಿ ಚಿತ್ರಿಸಿದ್ದಾರೆ.

ಇದೇ ಘುಲಾಮ್ ಮುಸ್ತಫಾ ಖಾರ್ ಅವರು ಹೀನಾಗೆ ಚಿಕ್ಕಪ್ಪನಾಗಬೇಕು. ಪಾಕಿಸ್ತಾನದ ಬಹುತೇಕ ಊಳಿಗಮಾನ್ಯ ಒಡೆಯರು ರಾಜಕೀಯ ಅಧಿಕಾರವನ್ನೂ ಮುಷ್ಠಿಯಲ್ಲಿ ಇರಿಸಿಕೊಂಡವರು. ಹೀನಾ ತಂದೆ ಘುಲಾಮ್ ನೂರ್ ರಬ್ಬಾನಿ ಖಾರ್ ನೂರ್ ಕೂಡ ಈ ಮಾತಿಗೆ ಹೊರತಲ್ಲ. ಪಂಜಾಬಿನ ಮುಖ್ಯಮಂತ್ರಿ ನವಾಜ್ ಷರೀಫ್ ಮಂತ್ರಿಮಂಡಲದಲ್ಲಿದ್ದವರು. 1990 ಮತ್ತು 1997ರಲ್ಲಿ ಪಾಕಿಸ್ತಾನದ ಸಂಸತ್ತಿಗೆ ಆಯ್ಕೆಯಾಗಿದ್ದವರು. ಹುರಿಯಾಳುಗಳು ಪದವೀಧರರಾಗಿರಬೇಕು ಎಂಬ ಹೊಸ ಕಾನೂನು 2002ರಲ್ಲಿ ನೂರ್ ರಬ್ಬಾನಿಗೆ ಅಡ್ಡಿಯಾಯಿತು. ಮಗಳು ಹೀನಾಳನ್ನು ಹೂಡಿದರು.

ಎರವರ ಮನೆಯ ಹೆಣ್ಣು ಜೀವಗಳನ್ನು ಕಬಳಿಸುವ ಭೂಮಾಲೀಕರಿಗೆ ತಮ್ಮ ಮನೆಯ ಹೆಣ್ಣುಮಕ್ಕಳು ಸಂದೂಕದಲ್ಲಿ ಇಟ್ಟು ಜತನ ಮಾಡಿಕೊಳ್ಳಬೇಕಾದ ಚರಾಸ್ತಿ. ಪಾಕಿಸ್ತಾನಿ ಮುಸ್ಲಿಮ್ ಲೀಗ್ (ಕ್ಯೂ) ಅಭ್ಯರ್ಥಿ ಹೀನಾ ಮನೆ ಬಿಟ್ಟು ಹೊರಗೆ ಹೆಜ್ಜೆ ಇಡಲಿಲ್ಲ. ಚುನಾವಣೆಯ ಭಿತ್ತಿಚಿತ್ರಗಳಲ್ಲಿ ಆಕೆಯ ಭಾವಚಿತ್ರದ ಸುಳಿವಿರಲಿಲ್ಲ. ತಂದೆ ರಬ್ಬಾನಿಯದೇ ಪ್ರಚಾರ, ರ್ಯಾಲಿಗಳು, ಭಾಷಣ, ಓಡಾಟ. ಮಗಳನ್ನು ಭಾರೀ ಅಂತರದಲ್ಲಿ ಗೆಲ್ಲಿಸಿದ್ದರು. 2008ರಲ್ಲಿ ಟಿಕೆಟ್ ದೊರೆಯದೆ ಭುಟ್ಟೋ ಅವರ ಪಾಕಿಸ್ತಾನಿ ಪೀಪಲ್ಸ್ ಪಾರ್ಟಿಯಿಂದ ಸ್ಪರ್ಧಿಸಿ ಗೆದ್ದರು. 2008ರಿಂದ 2011ರ ತನಕ ಹಣಕಾಸು ರಾಜ್ಯ ಮಂತ್ರಿಯಾಗಿ ಬಜೆಟ್ ಮಂಡನೆ. ಬಜೆಟ್ ಮಂಡಿಸಿದ ಪ್ರಥಮ ಪಾಕಿಸ್ತಾನಿ ಮಹಿಳಾ ಮಂತ್ರಿಯೆಂಬ ಅಗ್ಗಳಿಕೆ. ವಿದೇಶಾಂಗ ಮಂತ್ರಿ ಷಾ ಮಹಮೂದ್ ಖುರೇಷಿ ರಾಜೀನಾಮೆ ನೀಡಿದ ನಂತರ ಆ ಪದವಿ ಒಲಿದದ್ದು ಹೀನಾಗೆ.

ಹೀನಾ ಪತಿ ಫಿರೋಜ್ ಗುಲ್ಜಾರ್ ಒಡೆತನದ ಗೆಲಾಕ್ಸಿ ಜವಳಿ ಗಿರಣಿ ಪಾಕಿಸ್ತಾನಿ ಸರಕಾರಕ್ಕೆ ಪಾವತಿ ಮಾಡಬೇಕಿರುವ ವಿದ್ಯುಚ್ಛಕ್ತಿಯ ಬಾಕಿ ಏಳು ಕೋಟಿ ಪಾಕಿಸ್ತಾನಿ ರುಪಾಯಿಗಳು. ಈ ಸಂಬಂಧ ಬಾರೀ ಗುಲ್ಲೆದ್ದ ನಂತರ ತಿಂಗಳಿಗೆ ಮೂರು ಸಾವಿರ ರುಪಾಯಿಗಳ ಕಂತಿನಲ್ಲಿ ಪಾವತಿ ಮಾಡುವ ರಿಯಾಯಿತಿಯನ್ನು ಪತಿಗಾಗಿ ಗಿಟ್ಟಿಸಿಕೊಟ್ಟಿದ್ದಾರೆ. ಸುಪ್ರೀಮ್ ಕೋರ್ಟ್ ಇತ್ತೀಚೆಗೆ ಮನೆಗೆ ಕಳಿಸಿದ ಪಾಕ್ ಪ್ರಧಾನಿ ಯೂಸೂಫ್ ರಾಜಾ ಗಿಲಾನಿ ಆದಾಯ ತೆರಿಗೆ ನೀಡುತ್ತಿರಲಿಲ್ಲ. ಕಳೆದ ಹಲವಾರು ವರ್ಷಗಳಿಂದ ಕೇವಲ ಏಳೂವರೆ ಸಾವಿರ ರುಪಾಯಿಗಳ ಕೃಷಿ ತೆರಿಗೆಯನ್ನು ಮಾತ್ರ ನೀಡುತ್ತಿದ್ದಾರೆ ಎಂಬ ಟೀಕೆಯನ್ನು ಹೀನಾ ಎದುರಿಸಿದ್ದಾರೆ.

ಪಾಕಿಸ್ತಾನದ ಸರಕಾರಗಳು ಸದಾ ಕಾಲಕ್ಕೂ ಅಲ್ಲಿನ ಸೇನೆಯ ಅಡಿಯಾಳುಗಳು. ಸೇನೆಯ ಕರಿ ನೆರಳಿನಿಂದ ವಿದೇಶಾಂಗ ನೀತಿಯೂ ಪಾರಾಗುವಂತಿಲ್ಲ. ಹೀನಾಗೆ ಮುನ್ನ ವಿದೇಶಾಂಗ ಮಂತ್ರಿಯಾಗಿದ್ದ ಷಾ ಮಹಮೂದ್ ಖುರೇಶಿ ‘ಸೇನೆಯ ಮನುಷ್ಯ’ ಎಂಬ ಮಾತಿತ್ತು. ಇನ್ನು ಹೀನಾ ಸ್ವತಂತ್ರವಾಗಿ ಕೆಲಸ ಮಾಡಲಾದೀತೇ ಎಂಬ ಪ್ರಶ್ನೆ ಅತ್ಯಂತ ಪ್ರಸ್ತುತ. ಆದರೂ ಆಕೆ ಭರವಸೆ ಹುಟ್ಟಿಸಿದ್ದಾರೆ. Ministry of Foreign Affairs ನ ಜನ Ministry of Fashion Affairs ಎಂದು ಕರೆಯುತ್ತಿದ್ದರು. ನಾನು ಹಾಗಲ್ಲ ಎಂಬ ನಂಬಿಕೆ ನನಗಿದೆ. ಮಹಿಳೆಯಾಗಿ ಯೋಗ್ಯತೆ ಸಾಬೀತು ಮಾಡಲು ದುಪ್ಪಟ್ಟು ಶ್ರಮದಿಂದ ದುಡಿಯಬೇಕಾದ ಸ್ಥಿತಿ ನಮ್ಮ ಸಮಾಜದಲ್ಲಿದೆ ಎನ್ನುವ ಅರಿವು ಆಕೆಗಿದೆ.

ನಿತ್ಯ ತುಳಿತಕ್ಕೆ ತುತ್ತಾಗುವ ದೇಶದಲ್ಲಿ ಮಹಿಳೆಯರ ಹಕ್ಕುಗಳ ಕುರಿತು ಹೀನಾ ವಾಕ್ಚಾತುರ್ಯ ಈವರೆಗೆ ಕೇಳಿಬಂದಿಲ್ಲ. 25ನೆಯ ವಯಸ್ಸಿಗೇ ರಾಜಕಾರಣ ಪ್ರವೇಶಿಸಿದ ಈಕೆ, ತಮ್ಮ ಜಮೀನುಗಳ ನೆರೆ ಹೊರೆಯಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಈಡಾದ ಮುಖ್ತಾರ್? ಮಾಯಿ ಎಂಬ ರೈತ ಮಹಿಳೆಯ ವೇದನೆಯ ಕುರಿತು ಬಾಯಿ ಬಿಟ್ಟಿಲ್ಲ. ಮಾನಭಂಗಕ್ಕೆ ಗುರಿಯಾಗುವ ಪಾಕಿಸ್ತಾನದ ಹೆಣ್ಣುಮಕ್ಕಳು ದೂರ ನೀಡಲು ಹೋದರೆ ಅವರನ್ನು ವ್ಯಭಿಚಾರಿಗಳೆಂದು ಶಿಕ್ಷಿಸುವ ಕರಾಳ ಕಾನೂನಿನ ಕುರಿತು ಮೌನ ಧರಿಸಿದರು ಎಂಬ ಟೀಕೆಗಳಿಗೆ ಹೀನಾ ಸಮಜಾಯಿಷಿ ನೀಡಬೇಕಿದೆ.

~ ವಿ.ಕ

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

About ಗ.ಕ.ಅಂತರ್ಜಾಲ ವರದಿಗಾರರು